ಬೆಂಡುಗ

ವಿಕ್ಷನರಿದಿಂದ

ಬೆಂಡುಗ

ಬೆಂಡುಗ ಇದೊಂದು ಕರಾವಳಿಯಲ್ಲಿ ಕಾಣ ಸಿಗುವ ಅಪರೂಪದ ಕಾಡು ಮರ. ಇದು ಈಗ ಅಳಿವಿನ ಅಂಚಿನಲ್ಲಿದೆ. ಲಿಂಬೆ ಹಣ್ಣಿನ ಗಿಡದಂತೆ ಮೊನಚು ಮುಳ್ಳುಗಳನ್ನು ಹೊಂದಿರುವ ಈ ಮರ ಸಾಧಾರಣ 7 ಮೀ ಎತ್ತರದವೆರೆಗೆ ಬೆಳೆಯುತ್ತದೆ. ಕಾಂಡದಲ್ಲೇ ಬುಗುರಿಯಾಕಾರದ ಗೊಂಚಲು ಕಾಯಿ ಬಿಡುತ್ತದೆ. ಎಳತು ಕಾಯಿ ಹಸಿರಾಗಿದ್ದು, ಹಣ್ಣಾದಾಗ ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ತುಳುವಿನಲ್ಲಿ 'ನೈಕುಳಿ' ಅಥವಾ `ನೈಕುಲಿ' (ನಾಯಿಕೂಲಿ)ಎಂದು ಕರೆಯುತ್ತಾರೆ. ಕೂಲಿ ಎಂದರೆ ತುಳುವಿನಲ್ಲಿ ಹಲ್ಲು. ನಾಯಿ ಕಚ್ಚಿದರೆ ಇದರ ಬೀಜದ ಎಣ್ಣೆ ರಾಮಬಾಣದಂತೆ ಕೆಲಸ ಮಾಡುವುದರಿಂದ ನೈಕುಳಿ ಎಂಬ ಹೆಸರು ಬಂದಿದೆ. ಇದರ ಮುಳ್ಳುಗಳು ಕೂಡ ನಾಯಿಯ ಹಲ್ಲಿನಂತೆ ಮೊನಚು ಇರುವುದರಿಂದ ಈ ಹೆಸರು ಇದ್ದಿರಬಹುದು. ಕನ್ನಡದಲ್ಲಿ ಈ ಕಾಯಿಯನ್ನು ಬೆಂಡುಗ, ಬೊಡ್ಲಿಗೆ ಹಲ್ಲು, ಬೊಡ್ಲಿಗ ಎಂದೂ, ಮಲಯಾಳಂ ಇರುಮುಳ್ಳಿ ಅಂತಲೂ ಕರೆಯುತ್ತಾರೆ. Santalaceae ಕುಟುಂಬಕ್ಕೆ ಸೇರಿದ ಸೇರಿದ ಇದರ ವೈಜ್ಞಾನಿಕ ಹೆಸರು Scleropyrum pentandrum. ಹೊನ್ನೆ ಮರದ ಕಾಯಿಯಂತೆ ಇದರ ಕಾಯಿಯನ್ನು ಒಣಗಿಸಿ ಹಿಂದೆ ಅಡುಗೆ ಎಣ್ಣೆಯಾಗಿ ಬಳಸುತ್ತಿದ್ದರು. ಇದರ ಎಣ್ಣೆಯನ್ನು ತಲೆಗೆ ಹಚ್ಚಿದರೆ ಹಗಲಲ್ಲೂ ನಕ್ಷತ್ರ ಕಾಣಿಸುತ್ತದೆ ಎಂಬ ಮಾತಿದೆ. ಅಂದರೆ ಇದರ ಎಣ್ಣೆ ಕಣ್ಣು ದೃಷ್ಟಿಯನ್ನುತೀಕ್ಷ್ಣ ಮಾಡುತ್ತದೆ ಎನ್ನಬಹುದು. ಅಲ್ಲದೆ ನಾಯಿ ಕಚ್ಚಿದರೆ ಹಿಂದೆ ಔಷಧಿಯಾಗಿ ಇದರ ಎಣ್ಣೆ ಉಪಯೋಗಿಸುತ್ತಿದ್ದರು . ಆಯುರ್ವೇದ ಹಾಗೂ ಸಿದ್ಧವೈದ್ಯ ಪದ್ಧತಿಯಲ್ಲಿ ಇದರ ಉಪಯೋಗ ಆಗಿದೆ ಬಾಲ್ಯದಲ್ಲಿ ಮಕ್ಕಳು ಈ ಕಾಯಿಯನ್ನು ಬುಗರಿ ಆಡಲು ಬಳಸುತ್ತಿದ್ದರು . ಕರಿದ ಎಣ್ಣೆ, ನೈಕುಳಿ ಬೀಜ, ಹೊನ್ನೆ ಬೀಜ ಮತ್ತು ರಬ್ಬರ್ ಬೀಜಗಳ ಎಣ್ಣೆ ಹಿಂಡಿ ತೆಗೆದು ಬಯೋ ಡೀಸೆಲ್ ಆಗಿ ಬಳಕೆ ಮಾಡುತ್ತಿದ್ದಾರೆ.

"https://kn.wiktionary.org/w/index.php?title=ಬೆಂಡುಗ&oldid=660496" ಇಂದ ಪಡೆಯಲ್ಪಟ್ಟಿದೆ